Thursday, September 10, 2015

ಭ್ರಮನಿರಸನ

ಚೀತ್ಕಾರ ಕರುಳಲಿ ಕಡಲ್ಗೊರೆವ ತೆರದಿ
ಮಥಿಸಿ ಕಾದಿರೆ ಧುಮ್ಮಿಕ್ಕಿ ಹರಿಯುವಲ್ಕೆ
ಕಾಲ ನಿರುಕಿಸಿ ಮದಿರೆ ಕಾಣುವಲ್ತೆ
ಸವಿದಿನಗಳ ಕಾದು ಕಡಲ್ನೊರೆ ಮಾತ್ರ
ಕಾಲ್ಗಳ ತೋಯ್ದು ಸಿಹಿನೀರ ಒರತೆಯ
ಮತ್ತೂ ಭಾರಗೊಳಿಸಿ ದೂರ ಒತ್ತಿರೆ
ಸವಿ ಕಾಣಲೊಲ್ದು ಧರೆ ಶಾಂತಿ ನೀಡಲೊಲ್ದು
ಕರಿಮಾರಿ ಮೋರೆ ತೋರಲೊಲ್ದು ಮೊರೆಯ ಕೇಳಲೊಲ್ದು
ಕಣ್ರೆಪ್ಪೆ ತಾ ಮುಚ್ಚುತಲೆ ಕತ್ತಲೆ
ಜೀವಭಯದಿ ಚೀರುತಿದೆ ಆಸೆ ತಾ
ಹಳಸಿ ನಾರುತಿದೆ ಉನ್ಮತ್ತ ಪ್ರಾಣಕಿನ್ನು
ಶಾಂತಿ ಬಿಳಿನೆಳಲು; ಆಸ್ಥೆ ಮತ್ತೂ
ದೂರದಿಗಂತಕೋಡುವ ಬಿಸಿಲ್ಗುದುರೆ
ಚೀತ್ಕಾರ ಮಥಿಸಿ ಒಳಗೊಳಗೇ ದಹಿಸಿ
ಕಮ್ಮಗಾಗಬೇಕು ಕಹಿವಿಷವ ಬಿಳಿಹಾಲ
ಹಸಿನೊರೆಯೆಂದೇ ಕಾಣಬೇಕು
ತೊಳಸಿ ಬಂದ ಭಾವ ಕಡಲಾಳದ
ಪೆಟ್ಟಿಗೆಯೊಳಗೇ ಉಳಿದುಹೋಗಬೇಕು
ಕಣ್ಣೊಳು ನೆತ್ತರೊಸರಿದರೋ ಒರೆಸಿ ನಗಬೇಕು
ಮಾತಾಡಿ ದಣಿಯಬೇಕು
ಪದಗಳು ನೇಯಲ್ಪಟ್ಟರೂ ಸರಿಯೆ
ಕಣ್ಣಿಗೆ ನಗು ತಂಪು ಕಿವಿಗೆ ಪದಗಳಿಂಪಾಗಲೇ ಬೇಕು!!!!


No comments: