Monday, January 12, 2015

ಧರ್ಮಶ್ರೀ -ಎಸ್ ಎಲ್ ಭೈರಪ್ಪ

(ಇತ್ತೀಚಿನ ಪತ್ರಿಕೆಯೊಂದರ ಸಂದರ್ಶನದಲ್ಲಿ ಮರುಮತದಾನದ ಬಗ್ಗೆ ಭೈರಪ್ಪನವರ ಅಭಿಪ್ರಾಯವನ್ನ ಕೇಳಿದಾಗ ಅವರ ಉತ್ತರ- "ನಾನು ೧೯೫೯ ರಲ್ಲಿ ಬರೆದ ಧರ್ಮಶ್ರೀ ಕಾದಂಬರಿಯಲ್ಲಿ ಮರುಮತದಾನದ ಬಗ್ಗೆ ನನ್ನ ನಿಲುವು ಸ್ಪಷ್ಟವಾಗಿದೆ" ಎಂದು. ಅವರ ಈ ಹೇಳಿಕೆಯನ್ನೋಡಿಯೇ ಧರ್ಮಶ್ರೀ -ಯನ್ನೋದಿದೆ. )

ಮತಾಂತರದ ಮುನ್ನ-ನಂತರದ ಭಾವನೆ-ಸಂಸ್ಕೃತಿ-ಸಂಬಂಧಗಳ ಘರ್ಷಣೆಯೇ ಇಲ್ಲಿನ ಕಥಾವಸ್ತು. ಸಿರಿ,ಪದವಿಗಳಿಗಾಗಲ್ಲದೆ ಓದಿ ಜ್ಞಾನವಂತನಾಗಬೇಕೆಂಬ ಒಂದೇ ಆಸೆಯಿಂದ ತನ್ನ ವಿದ್ಯಾರ್ಥಿ ಜೀವನದಲ್ಲಿ ನಾನಾ ಪಡಿಪಾಟಲು ಅನುಭವಿಸುವ ನಾಯಕ ಪದವಿ ಮುಗಿಸುವಷ್ಟರಲ್ಲಿ ಲಿಲ್ಲಿಯೆಂಬ ಕ್ರೈಸ್ತ ಹುಡುಗಿಯನ್ನು ಪ್ರೀತಿಸುತ್ತಾನೆ. ಬ್ರಾಹ್ಮಣ ಹುಡುಗನಾದ ಆತ ಮುಂಚಿನಿಂದ ಚರ್ಚೆಯಿಂದಲೂ, ಅಧ್ಯಯನದಿಂದಲೂ ಹಿಂದುತ್ವದ ಕುರಿತು ಅಚಲವಾದ ನಂಬಿಕೆ ಪೋಷಿಸಿಕೊಂಡಿರುತ್ತಾನೆ. ಕ್ರೈಸ್ತ ಧರ್ಮ-ಸಂಸ್ಕೃತಿಯೆಡೆಗೆ ಬಹಳವಾಗಿ ಶ್ರದ್ಧೆಯಿಟ್ಟ ಲಿಲ್ಲಿಯು ಇವನೊಡನೆ ಚರ್ಚೆ ಮಾಡುತ್ತ ಮಾಡುತ್ತ ಹಿಂದೂ ಧರ್ಮದೆಡೆ ಬೌದ್ಧಿಕವಾಗಿ ವಾಲುತ್ತಾಳೆ. ಹಿಂದುತ್ವ ಒಂದು ಧರ್ಮವಲ್ಲ, ಅದೊಂದು ಆಚರಣೆ ಎನ್ನುವಂತೆ ಹಿಂದುವಾಗುತ್ತ ಬಂದ ಲಿಲ್ಲಿಯೆಡೆಗೆ ಪ್ರಜ್ಞಾಪೂರ್ವಕವಾಗಿ ದೂರವಿರಬೇಕೆಂದುಕೊಂಡಷ್ಟೂ ಸೆಳೆಯಲ್ಪಡುತ್ತಾನೆ. ಮದುವೆಗೆ ತಮ್ಮ ಮತಗಳು ಅಡ್ಡಿಯಾಗುತ್ತವೆ. ಹಿಂದೂವಾಗಿ ಲಿಲ್ಲಿಯನ್ನು ಮತಾಂತರಿಸಿದರೆ ಆಗುವ ಪಲ್ಲಟಕ್ಕಿಂತ ತಾನೇ ಕ್ರೈಸ್ತನಾದರಾಯಿತೆಂದು ತನ್ನ ಕಷ್ಟದ ದಿನಗಳಲ್ಲಿ ಆಗದ ಹಿಂದೂ ಧರ್ಮವನ್ನ, ತನ್ನ ಸ್ವಜಾತೀಯರನ್ನ ವಿಮರ್ಶಿಸಿಕೊಳ್ಳುತ್ತಾನೆ. ಅಂತೆಯೇ ಮತಾಂತರ ಹೊಂದಿ ಆಕೆಯನ್ನು ವರಿಸುತ್ತಾನೆ. ಅದೆಷ್ಟೇ ತಿಣುಕಾಡಿದರೂ ಕ್ರೈಸ್ತ ಸಂಸ್ಕೃತಿಗೆ ಒಗ್ಗಲಾರ-ತನ್ನ ಪೂರ್ವಾಶ್ರಮದ ಬಂಧಗಳಿಂದ ಬಿಡಿಸಿಕೊಳ್ಳಲಾರನಾಗುತ್ತಾನೆ. ಸಂಬಂಧಪಲ್ಲಟಕ್ಕಿಂತ ತನ್ನಲ್ಲಾದ ಭಾವ ಪಲ್ಲಟ ಸಹಸ್ರಾರು ಪಾಲು ದೊಡ್ಡದಾಗುತ್ತದೆ. ಕೊನೆಗೆ ಸಮಾನಮನಸ್ಕನೊಬ್ಬನ  ಸಲಹೆಯಂತೆ ಲಿಲ್ಲಿಯೊಡನೆ ಮರುಮತಾಂತರಗೊಂಡು ಆರ್ಯಸಮಾಜಿಗನಾಗುತ್ತಾನೆ. 

ಯಾವ ಚರ್ಚಾಪ್ರಾವೀಣ್ಯತೆಯನ್ನು ಮತಾಂತರವನ್ನ ಖಂಡಾತುಂಡವಾಗಿ ವಿರೋಧಿಸಲು ಬಳಸುತ್ತಿದ್ದನೋ ಆ ವಾಕ್ಶಕ್ತಿಯನ್ನು ಬಿಶಪ್ಪರು ಮತಾಂತರ ಪ್ರೇರೇಪಿಸಲು ಒತ್ತಾಯಿಸಿದಾಗ, ಮತಾಂತರಗೊಂಡದ್ದಕ್ಕೆ ಮರಣಶಯ್ಯೆಯಲ್ಲಿದ್ದ ತಂದೆಯಿಂದಲೂ ಮೌನ ನಿರಾಕರಣ ಕಂಡಾಗ, ಆತ ಅಪರಾಧೀ ಭಾವದಿಂದ ಕುಗ್ಗುತ್ತ ಹೋಗುತ್ತಾನೆ. ಒಡಹುಟ್ಟಿದ ತಂಗಿ ತನ್ನ ಹೆಂಡತಿಯನ್ನು ಅತ್ತಿಗೆಯೆಂದು ಸಂಬೋಧಿಸದೇ ಇದ್ದಾಗ ಏಳುವ ತಳಮಳ- ಹಿಂದೂ ಹಿತೈಷಿಗಳ ಮದುವೆಯೊಂದರಲ್ಲಿ ತನ್ನ ಹೆಂಡತಿಗೆ ಸಿಗುವ ಸಮಾನ ಆತಿಥ್ಯದಲ್ಲೂ- ತಮ್ಮ ಸಂಸ್ಕಾರ ಇದರಿಂದ ಬೇರೆಯಾಯಿತಲ್ಲ, ಎಂಥಹಾ ಸಮಾನ ಧರ್ಮೀಯರಂತೆ ಕಂಡರೂ ಆ ಸಂಸ್ಕೃತಿಯ ಭಾಗ ನಾವಲ್ಲದೇ ಹೋದೆವಲ್ಲ-ಎಂಬ ವಿರೋಧಾಭಾಸವಾಗಿ ತಳಮಳ ಮುಂದುವರೆಯುತ್ತದೆ.

ಹಿಂದೂ ಧರ್ಮದ ಬಗ್ಗೆ ಸ್ಪಷ್ಟ ಅರಿವು-ಒಲವಿದ್ದೂ, ಸಂದರ್ಭಕ್ಕೆ ಕಟ್ಟುಬಿದ್ದು ಕ್ರೈಸ್ತನಾಗುವ ಸತ್ಯನ ತಾಕಲಾಟವನ್ನ ಕಾದಂಬರಿ ಶಕ್ತವಾಗಿ ಮೂಡಿಸಿದೆ.  ಮತಾಂತರ-ಮರುಮತಾಂತರಗಳ ಬಗ್ಗೆ ಚರ್ಚೆಯಾಗುತ್ತಿರುವ ಈ ಸಮಯ ಧರ್ಮಶ್ರೀ ಯ ಅಧ್ಯಯನಕ್ಕಂತೂ ತಕ್ಕುದಾಗಿದೆ.

No comments: